ಪಾಂಚ್ ಮಹಾಲ್ -
ಭಾರತದ ಗುಜರಾತ್ ರಾಜ್ಯದಲ್ಲಿರುವ ಒಂದು ಜಿಲ್ಲೆ. ಈಶಾನ್ಯದಲ್ಲಿ ರಾಜಾಸ್ಥಾನ ಮತ್ತು ಪೂರ್ವದಲ್ಲಿ ಮಧ್ಯಪ್ರದೇಶ ರಾಜ್ಯಗಳೂ ದಕ್ಷಿಣ, ಪಶ್ಚಿಮ ಮತ್ತು ಉತ್ತರಗಳಲ್ಲಿ ಬರೋಡ, ಕೈರಾ ಮತ್ತು ಸಬರಕಾಂಠ ಜಿಲ್ಲೆಗಳೂ ಇವೆ. ವಿಸ್ತೀರ್ಣ 9,026 ಚ.ಕಿಮೀ ಜನಸಂಖ್ಯೆ 18,48,804 (1971). ಬ್ರಿಟಿಷ್ ಸರ್ಕಾರ ಈ ಜಿಲ್ಲೆಯನ್ನು ಭಡೋಚ ಜಿಲ್ಲೆಯಲ್ಲಿ ವಿಲೀನಗೊಳಿಸಿತ್ತು. (1933). 1945ರಲ್ಲಿ ಪಾಂಚ್ ಮಹಾಲ್ ಪ್ರತ್ಯೇಕ ಜಿಲ್ಲೆಯಾಯಿತು. ಭಾರತ ಸ್ವತಂತ್ರವಾದ ಮೇಲೆ 1947ರಲ್ಲಿ ಕೆಲವು ಪ್ರದೇಶಗಳನ್ನು ಪಾಂಚ್ ಮಹಾಲ್ ಜಿಲ್ಲೆಗೆ ಸೇರಿಸಿ, ಕೆಲವು ಪ್ರದೇಶಗಳನ್ನು ಇದರಿಂದ ಸಬರಕಾಂಠ ಜಿಲ್ಲೆಗೆ ವರ್ಗಾಯಿಸಲಾಯಿತು. ಜಿಲ್ಲೆಯ ಪ್ರಮುಖ ಪಟ್ಟಣಗಳು ಗೋಧ್ರಾ ಹಾಗೂ ದೋಹದ್, ಜಿಲ್ಲೆಯ ಆಡಳಿತ ಕೇಂದ್ರ ಗೋಧ್ರಾ. ಪಾವಗಢ್ ಬೆಟ್ಟ. ರಜಪೂತರಿಂದ ಇತಿಹಾಸ ಪ್ರಸಿದ್ಧ ಚಂಪನೇರ್ ಕೋಟೆ ಇವು ಪ್ರೇಕ್ಷಣೀಯ ಸ್ಥಳಗಳು. ಪಾವಗಢ್ ಸಮುದ್ರಮಟ್ಟದಿಂದ 820 ಮೀ. ಎತ್ತರದಲ್ಲಿದೆ. ಬೆಟ್ಟದ ನೆತ್ತಿಯ ಮೇಲೆ ಕಾಳಿಯ ದೇವಾಲಯವಿದೆ. ಜಿಲ್ಲೆಯಲ್ಲಿ ಬಂಜರುಭೂಮಿಯ ಅಧಿಕ, ಕುರುಚಲು ಕಾಡುಗಳು ಅಲ್ಲಲ್ಲಿವೆ. ಪ್ರಧಾನ ಬೆಳೆಗಳು ಹತ್ತಿ, ಜೋಳ, ದ್ವಿದಳ ಧಾನ್ಯ ಹಾಗೂ ಮುಸುಕಿನ ಜೋಳ. ಭಿಲ್ಲರು ಕೋಲರು, ಕೈಕೂರ ಇವರು ಇಲ್ಲಿಯ ಆದಿವಾಸಿಜನ. ಶಿವರಾಜ್ ಪುರದಲ್ಲಿ  ಮ್ಯಾಂಗನೀಸ್ ಗಣಿಗಳಿವೆ. ದೋಹದ್ ಮತ್ತು ಇತರ ಪ್ರಮುಖ ಪಟ್ಟಣಗಳಿಗೆ ಭಾರತದ ಪಶ್ಚಿಮ ವಲಯದ ರೈಲುಮಾರ್ಗಗಳೂ ರಸ್ತೆಗಳೂ ಇವೆ.
(ವಿ.ಜಿ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ